ಬ್ರೋಕ, ಪಿಯರೆ ಪಾಲ್
	1824-80 ಫ್ರಾನ್ಸಿನ ಶಸ್ತ್ರಕ್ರಿಯಾ ವೈದ್ಯ ಮತ್ತು ಮಾನವ ವಿಜ್ಞಾನಿ. ಜನನ 28-2-1824 ಮರಣ 9-7-1880. ಚಿಕ್ಕಂದಿನಲ್ಲಿ ಪ್ರೌಢ ಗಣಿತದತ್ತ ಒಲವು ತೋರಿದರೂ ದೊಡ್ಡವನಾದಂತೆ ಪ್ಯಾರಿಸ್ಸಿನಲ್ಲಿ ವೈದ್ಯ ವ್ಯಾಸಂಗಮಾಡಿ (1841), ಆಸ್ಪತ್ರೆ ಶಸ್ತ್ರವೈದ್ಯನಾಗಿ (1844), ವೈದ್ಯಶಾಲೆಯಲ್ಲಿ ಅಂಗರಚನಾವಿಜ್ಞಾನದ ಸಹಾಯಕನಾಗಿ (1846), ಮಾದರಿಗಳ ತಯಾರಕನಾಗಿ (1848) ಮುಂದೆ ಶಸ್ತ್ರವೈದ್ಯದ ರೋಗವಿಜ್ಞಾನ ಪ್ರಾಧ್ಯಾಪಕನಾದ (1867). ಗಣಿತಾಸಕ್ತಿ ಹವ್ಯಾಸವಾಗಿ ಉಳಿಯಿತು. ಫ್ರೆಂಚ್ ಸಾಹಿತ್ಯ ತತ್ತ್ವಶಾಸ್ತ್ರಗಳಲ್ಲೂ ಅಮಿತಾಸಕ್ತಿ ಇದ್ದು ಸಂಭಾಷಣಚತುರನೆಂದೇ ಹೆಸರು ಪಡೆದಿದ್ದ. 1870ರ ತರುವಾಯ ತಪ್ಪದೆ ಸೆನೆಟರಾಗಿದ್ದ. ಮಾನವವಿಜ್ಞಾನ ಮತ್ತು ಅನ್ವಿತಗಣಿತಗಳ ಬಗೆಗಿದ್ದ ಅಭಿರುಚಿಯ ದೆಸೆಯಿಂದ ಕಪಾಲ ಮತ್ತು ಮಿದುಳಿನ ಮಾಪನಕ್ಕಾಗಿ ವಿಶೇಷ ಉಪಕರಣಗಳನ್ನು ರಚಿಸಿ ಮಿದುಳಿನ ಅಂಗರಚನೆ ಕುರಿತು ಅಧ್ಯಯನ ನಡೆಸಿದ. ಫ್ರಾನ್ಸ್-ಜರ್ಮನಿ ನಡುವಣ ಯುದ್ಧಕಾಲದಲ್ಲಿ ಲಾ ಪಿಟೀ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು ಯುದ್ಧನಿಂತಮೇಲೆ ಮತ್ತೆ ಶಿಕ್ಷಕನಾದ.

	ಭೌತಮಾನವವಿಜ್ಞಾನದ ಆಧುನಿಕ ವಿಕಾಸರಂಗದಲ್ಲಿ ಬ್ರೋಕನ ಹೆಸರು ಶಾಶ್ವತವಾಗಿದೆ. ಈತ ಮಿದುಳಿನ ತುಲನಾತ್ಮಕ ರೂಪವಿಜ್ಞಾನ, ಕಪಾಲ ಮತ್ತು ಮಿದುಳಿನ ಅಂಗವಿನ್ಯಾಸಪಟ ಮತ್ತು ಚರಿತ್ರಪೂರ್ವ ತಲೆಕೊರತೆಗಳ ಸಂಶೋಧನೆ ನಡೆಸಿದ. ನಿಯಾಂಡರ್ತಾಲ್ ಮಾನವನನ್ನು ಶೋಧಿಸಿ ವಿವರಿಸಿದ. ಮಿದುಳಿನ ಕೆಲವೆಡೆಗಳಲ್ಲಿ ನಿರ್ದಿಷ್ಟ ಕ್ರಿಯೆಗಳು ನಡೆಯುತ್ತವೆಂಬ ತನ್ನ ಕಲ್ಪನಾನುಸಾರ ಈತ ಮಿದುಳಿನಲ್ಲಿ ಎದ್ದಿರುವ ಕುರುವಿನ ಕೀವು ಹೊರತೆಗೆಯಲು ಕಪಾಲವನ್ನು ತೂತುಕೊರೆದ. ಈ ನಿಟ್ಟಿನಲ್ಲಿ ಈತನೇ ಮೊದಲಿಗ. ಕಪಾಲ ವಿಜ್ಞಾನದಲ್ಲಿ (ಕ್ರೇನಿಯಾಲಜಿ) ಈತ ಅಸಂಖ್ಯಾತ ಶೋಧನೆಗಳನ್ನು ಮಾಡಿ ಅವುಗಳ ಅಭ್ಯಾಸಕ್ಕಾಗಿ ಹೊಸ ತಂತ್ರಗಳನ್ನೂ ವಿಧಾನಗಳನ್ನೂ ಆವಿಷ್ಕರಿಸಿದ. ಕಪಾಲಮಾಪನದಲ್ಲಿ ಬ್ರೋಕನ ಸೂತ್ರ ಎತ್ತರಕ್ಕೂ ತೂಕಕ್ಕೂ ಸಂಬಂಧಿಸಿದೆ.

	ಮಿದುಳಿನ ಕ್ರಿಯೆಗಳ ಸ್ಥಾನ ನಿರ್ಧಾರದ ಬಗ್ಗೆ ಈತ ಮಾಡಿದ ಶೋಧನೆಗಳಿಂದ (1861-65) ಮಿದುಳಿನ ಹಣೆಭಾಗದ ಎಡಹಾಲೆಯಲ್ಲಿ 3ನೆಯ ಸುರುಳಿಯಲ್ಲಿರುವ ಮಾತಿನಕೇಂದ್ರ ಪ್ರದೇಶ ಮತ್ತು ಸುರುಳಿಗಳಿಗೆ ಅಂಗರಚನಾವಿಜ್ಞಾನದಲ್ಲಿ ಈಗಲೂ ಈತನ ಹೆಸರಿದೆ. ಮಾತನಾಡುವಾಗಿನ ನಾಲಗೆ, ತುಟಿ, ಧ್ವನಿನಾಳಗಳ ಚಲನೆಯನ್ನು ಈ ಕೇಂದ್ರ ನಿಯಂತ್ರಿಸುತ್ತದೆ. ಇದರ ಕೆಲಸ ಕೆಟ್ಟಾಗ ಏಳುವ ಕಾಯಿಲೆಗೆ ಅಫೇಸಿಯ (ಮಾತುಗೊರೆ) ಎಂಬ ಹೆಸರಿದೆ. ಕಪಾಲಮಾಪನದಲ್ಲಿ ಗುರುತಿಸಲು ಅತ್ಯಗತ್ಯವಾದ ಏಳೆಂಟು ದಿಗ್ದರ್ಶಕ ಮೂಲ ಬಿಂದುಗಳನ್ನು ಸೂಚಿಸಿದ್ದಾನೆ. ಇವಕ್ಕೆ ಬ್ರೋಕ ಇಟ್ಟ ಹೆಸರುಗಳೇ ಇಂದಿಗೂ ಜಾರಿಯಲ್ಲಿವೆ.

	1861ಕ್ಕೆ ಮುಂದೆ ಈತ ಏಡಿಗಂತಿ, ಅಗಲುಬ್ಬು (ಅನ್ಯೂರಿಸಮ್) ಮತ್ತಿತರ ವಿಷಯ ಕುರಿತು ಸಂಶೋಧನೆ ನಡೆಸಿದ. ಮಾನವವಿಜ್ಞಾನದಲ್ಲಿ ಅತ್ಯಂತ ಪ್ರತಿಭಾವಂತನಾಗಿದ್ದು ಪ್ಯಾರಿಸ್ಸಿನ ಮಾನವವಿಜ್ಞಾನ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿಯೂ (1859) ಮಾನವವಿಜ್ಞಾನ ವಿಮರ್ಶೆ ಪತ್ರಿಕೆಯ ಸ್ಥಾಪಕ ಸಂಪಾದಕನಾಗಿಯೂ (1872) ಸಾಯುವ ತನಕ ಶ್ರಮಿಸಿದ. 
												(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ